ಡೆಹ್ರಾಡೂನ್‌ನಲ್ಲಿ ಕೊಡಗಿನ ಸೈನಿಕ ನೇಣಿಗೆ ಶರಣು: ಪಾರ್ಥೀವ ಶರೀರದ ನಿರೀಕ್ಷೆಯಲ್ಲಿ ಹೆತ್ತವರು

Contacts:

Madikeri

oi-Lavakumar B M

|

Published: Wednesday, March 31, 2021, 7:57 [IST]

ಮಡಿಕೇರಿ, ಮಾರ್ಚ್ 31: ಕೊಡಗಿನ ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿ ನಿವಾಸಿ ಲೇಹ್-ಲಡಾಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೊಬ್ಬ ಸಾಂಸಾರಿಕ ಕಲಹದಿಂದ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತನ ಪಾರ್ಥಿವ ಶರೀರಕ್ಕಾಗಿ ಹೆತ್ತವರು ಕಾಯುತ್ತಿದ್ದಾರೆ.

ಗೊಂದಿ ಬಸವನಹಳ್ಳಿ ನಿವಾಸಿ ನಾಗರಾಜ ಎಂಬುವರ ಪುತ್ರ ಹವಲ್ದಾರ್ ಪ್ರಜ್ವಲ್ (36) ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕ. ಈತ ಇತ್ತೀಚೆಗೆ ರಜೆಯಲ್ಲಿ ಮನೆಗೆ ಬಂದಿದ್ದು, ರಜೆ ಮುಗಿಸಿ ಲಡಾಕ್‍ಗೆ ತೆರಳುವ ವೇಳೆ ಮಾರ್ಗ ಮಧ್ಯೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.

ಎನ್‌ಎಸ್‌ಜಿ ಮುಖ್ಯಸ್ಥರಾಗಿ ಕೊಡಗು ಮೂಲದ ಎಂ.ಎ.ಗಣಪತಿ ನೇಮಕ

18 ವರ್ಷಗಳ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಹವಲ್ದಾರ್ ಪ್ರಜ್ವಲ್ ಅವರ ಆತ್ಮಹತ್ಯೆಗೆ ಸಾಂಸಾರಿಕ ಕಲಹ ಕಾರಣ ಎನ್ನಲಾಗುತ್ತಿದೆ. ಈತ 11 ವರ್ಷಗಳ ಹಿಂದೆ ಮುಳ್ಳುಸೋಗೆ ಗ್ರಾಮದ ನವ್ಯ ಎಂಬಾಕೆಯನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಈತ ಆತ್ಮಹತ್ಯೆಗೆ ಮುನ್ನ ವಿಡಿಯೋ ಲೈವ್ ಮಾಡಿ ನೋವು ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಪತ್ನಿ ನೀಡುತ್ತಿದ್ದ ಕಿರುಕುಳದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಸೈನಿಕ ಪ್ರಜ್ವಲ್‍ನ ಪಾರ್ಥೀವ ಶರೀರ ಇನ್ನೂ ಗ್ರಾಮಕ್ಕೆ ಬಾರದ ಕಾರಣ ಹೆತ್ತವರು ಸೇರಿದಂತೆ ಬಂಧು-ಬಾಂಧವರು ಕಾಯುತ್ತಿದ್ದು ಆಕ್ರಂದನ ಮುಗಿಲು ಮುಟ್ಟಿದೆ.

ಪ್ರತಿ ಬಾರಿಯೂ ಮಗ ಬರುವಾಗ ಖುಷಿಯಿಂದ ಎದುರು ನೋಡುತ್ತಿದ್ದ ಹೆತ್ತವರು ಈಗ ಆತನ ಮೃತದೇಹವಾಗಿ ನೋಡಬೇಕಲ್ಲ ಎಂಬ ನೋವು ಕಣ್ಣೀರಾಗಿ ಹರಿಯುತ್ತಿದೆ. ಬಡತನದಲ್ಲಿ ಬೆಂದ ಕುಟುಂಬ ಕಲ್ಲು ಒಡೆದು ಜೀವನ ಸಾಗಿಸುತ್ತಿತ್ತು. ಪ್ರಜ್ವಲ್ ಸೇನೆಗೆ ಸೇರಿದ ಬಳಿಕ ಬದುಕು ಒಂದಷ್ಟು ಮಟ್ಟಿಗೆ ಹಸನಾಗಿತ್ತು. ಮಗನಿಂದಾಗಿ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ಕೊನೆ ತನಕ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ ಮಗನ ಸಾವಿನ ಸುದ್ದಿ ಬರ ಸಿಡಿಲಿನಂತೆ ಬಡಿದಿದೆ.

ಹೆತ್ತವರು ಮತ್ತು ಪತ್ನಿ ಕಾರಿನಲ್ಲಿ ಓಡಾಡಬೇಕೆಂದು ಇತ್ತೀಚೆಗೆ ಕಾರನ್ನು ಖರೀದಿಸಿದ್ದನು. ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಹೆತ್ತವರಿಗೆ ಬಂದಿದೆಯಾದರೂ ಪಾರ್ಥೀವ ಶರೀರ ಯಾವಾಗ ಗ್ರಾಮಕ್ಕೆ ಬರುತ್ತದೆ ಎಂಬ ಮಾಹಿತಿ ಇನ್ನೂ ಲಭ್ಯವಾಗದ ಕಾರಣ ಮನೆಯ ಮುಂದೆ ಜನ ಕಾಯುತ್ತಲೇ ಇದ್ದಾರೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 – 25497777

Posted in: Kannada News Posted by: admin On: