ಏಪ್ರಿಲ್ 1ರಿಂದ ಎಲೆಕ್ಟೊರಲ್ ಬಾಂಡ್ ವಿತರಣೆಗೆ ಸರ್ಕಾರ ಅನುಮೋದನೆ

Contacts:

India

oi-Amith

|

Published: Wednesday, March 31, 2021, 13:52 [IST]

ನವದೆಹಲಿ, ಮಾರ್ಚ್ 31: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳ ನಡುವೆಯೇ ಎಲೆಕ್ಟೊರಲ್ ಬಾಂಡ್‌ಗಳ 16ನೇ ಸಾಲನ್ನು ವಿತರಣೆ ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ. ಏಪ್ರಿಲ್ 1 ರಿಂದ ಏಪ್ರಿಲ್ 10 ರಿಂದ ಎಲೆಕ್ಟೊರಲ್ ಬಾಂಡ್‌ಗಳ ಮಾರಾಟ ನಡೆಯಲಿದೆ.

ರಾಜಕೀಯ ಪಕ್ಷಗಳಿಗೆ ಹಣದ ರೂಪದಲ್ಲಿ ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಎಲೆಕ್ಟೊರಲ್ ಬಾಂಡ್ (ಚುನಾವಣಾ ಬಾಂಡ್) ನೀಡುವ ಪದ್ಧತಿ 2018ರಲ್ಲಿ ಜಾರಿಗೆ ಬಂದಿತ್ತು. ಎಸ್‌ಬಿಐ ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ ಹತ್ತು ದಿನ ಎಲೆಕ್ಟೊರಲ್ ಬಾಂಡ್ ವಿತರಿಸಲಾಗುತ್ತದೆ. ಈ ಬಾಂಡ್ 15 ದಿನಗಳ ಕಾಲಾವಧಿ ಹೊಂದಿದ್ದು, ಅದರಲ್ಲಿ ದೇಣಿಗೆ ನೀಡಿದವರ ವಿವರ ಇರುವುದಿಲ್ಲ. ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮ ಅನುಸರಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.

ಎಲೆಕ್ಟೊರಲ್ ಬಾಂಡ್ ವಿತರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ

ಆದರೆ ಅಂತಹ ಬಾಂಡ್‌ಗಳ ಮೂಲಕ ದೇಣಿಗೆ ಸಂಗ್ರಹಿಸುವುದು ಅವ್ಯವಹಾರಗಳಿಗೆ ಕಾರಣವಾಗುತ್ತದೆ. ಇದರಿಂದ ದೇಣಿಗೆ ವಿವರಗಳು ಬಹಿರಂಗವಾಗುವುದಿಲ್ಲ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು.

ಚುನಾವಣಾ ಆಯೋಗ ಕೂಡ ಎಲೆಕ್ಟೊರಲ್ ಬಾಂಡ್‌ಗಳ ವಿತರಣೆಗೆ ತನ್ನ ಆಕ್ಷೇಪವಿಲ್ಲ ಎಂದು ತಿಳಿಸಿದೆ. ಯಾವುದೇ ರಾಜಕೀಯ ಪಕ್ಷಗಲು ಎಲೆಕ್ಟೊರಲ್ ಬಾಂಡ್‌ಗಳ ಬಗ್ಗೆ ಉಲ್ಲೇಖಿಸಿ ಯಾವುದೇ ಸಾರ್ವಜನಿಕ ಸಭೆಯಲ್ಲಿ ಅಥವಾ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಪತ್ರಿಕೆ ಅಥವಾ ಸಾರ್ವಜನಿಕರಿಗೆ ಹೇಳಿಕೆಗಳನ್ನು ನೀಡಬಾರದು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.

ಭಾರತೀಯ ಸ್ಟೇಟ್ ಬ್ಯಾಂಕ್‌ನ 29 ನಿರ್ದಿಷ್ಟ ಶಾಖೆಗಳಲ್ಲಿ ಎಲೆಕ್ಟೊರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ.

ಚುನಾವಣಾ ಬಾಂಡ್ ಯೋಜನೆ ತಡೆ ಕುರಿತಂತೆ ಸುಪ್ರೀಂ ಮಹತ್ವದ ಆದೇಶ

ಏಪ್ರಿಲ್ 1ರಿಂದ ಹೊಸ ಎಲೆಕ್ಟೊರಲ್ ಬಾಂಡ್‌ಗಳನ್ನು ವಿತರಿಸಬಹುದು ಎಂದು ಸುಪ್ರೀಂಕೋರ್ಟ್ ಕಳೆದ ಶುಕ್ರವಾರ ತೀರ್ಪು ನೀಡಿತ್ತು, ಎಲೆಕ್ಟೊರಲ್ ಬಾಂಡ್‌ಗಳಿಲ್ಲದೆ ಹೋದರೆ ರಾಜಕೀಯ ಪಕ್ಷಗಳು ನಗದು ಹಣವನ್ನು ಭಾರಿ ಪ್ರಮಾಣದಲ್ಲಿ ಬಳಸುವ ಸಾಧ್ಯತೆ ಇರುವುದರಿಂದ ಅವುಗಳಿಗೆ ತಾನು ಅನುಮೋದನೆ ನೀಡಿರುವುದಾಗಿ ಚುನಾವಣಾ ಆಯೋಗ ವಾದ ಮಂಡಿಸಿತ್ತು. ಅದನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

ಚುನಾವಣೆ ಮತ್ತು ರಾಜಕೀಯ ಸುಧಾರಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆ ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್), ಏಪ್ರಿಲ್ 1 ರಿಂದ ಏಪ್ರಿಲ್ 10ರ ನಡುವೆ ನಿಗದಿಪಡಿಸಿರುವ ಎಲೆಕ್ಟೊರಲ್ ಬಾಂಡ್‌ಗಳ ಮಾರಾಟಕ್ಕೆ ಮಧ್ಯಂತರ ತಡೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ರಾಜಕೀಯ ಪಕ್ಷಗಳಿಗೆ ಬರುವ ಅನುದಾನ ಮತ್ತು ಅವುಗಳ ಖಾತೆಗಳ ಪಾರದರ್ಶಕತೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗೆಹರಿಯುವವರೆಗೂ ಬಾಂಡ್‌ಗಳ ಮಾರಾಟಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೆರಿಗಳ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಬೊಕ್ಕಸಕ್ಕೆ ಪ್ರಮುಖ ಕಂಪೆನಿಗಳು ಲಂಚದ ರೂಪದಲ್ಲಿ ಹಣ ತುಂಬಿಸಬಹುದು ಎಂದು ಎಡಿಆರ್ ಅನುಮಾನ ವ್ಯಕ್ತಪಡಿಸಿತ್ತು.

Posted in: Kannada News Posted by: admin On: